Wednesday 15 June 2011

ಮಳೆ ಮತ; ಜನ ಹಿತ..........

          ಮುಂಗಾರು ಹಿಂಗಾರು ಹಚ್ಚೊಡೆಯಲಿ
          ಅನ್ನದಾತನ ತನು ಮನವರಳಲಿ;

          ಜಲದೊಡಲು ಉಕ್ಕಿ ಹರಿದು
          ಜೀವಲೋಕದಲಿ ನೆಮ್ಮದಿ ನೆಲೆಸಲಿ;

          ಭೂದೇವಿಯ ವರಪ್ರಸಾದ ಅಕ್ಷಯವಾಗಲಿ
          ಮಣ್ಣಿನ ಮಗನ ಬದುಕು ಹಸನಾಗಲಿ;

          ನೇಣಿಗೆ ಕೊರಳೊಡ್ಡದೇ ರೈತ
          ರಂಟೆಗೆ ಹೆಗಲೊಡ್ಡಿ ಬೆಳೆಯಲಿ ಭತ್ತ;

          ನೇಗಿಲಯೋಗಿ ಹಸಿರಾಗಲಿ ಉಸಿರಾಗಲಿ
          ಅವನಿಂದ ನಾವು ಉಳಿದು ಬೆಳೆಯಲಿ;

                   ಸ್ನೇಹಿತರೇ, ಇದನ್ನ ಇತ್ತೀಚೆಗೆ ಪ್ರಸಿದ್ಧಿಗೆ ಬರುತ್ತಿರುವ ಜನಶ್ರೀ ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ"ಜನಶ್ರೀ ಆಶಯ" ವೆನ್ನೋ ಸಣ್ಣ ಕಾರ್ಯಕ್ರಮ ನೋಡಿದಾಗ ಅನಿಸಿದ್ದು. ಅದರಲ್ಲಿ ಬಳಸಿರುವ ಹಾಡು, ಬಹುಷ ಜ್ಞ್ಯಾನಪೀಠ ಪ್ರಶಸ್ತಿ ಪುರಸ್ಕ್ರತ, ಶ್ರೀ ಕುವೆಂಪು ರವರು ಬರೆದಿರುವ ಕವಿತೆಯೆನಿಸುತ್ತದೆ. ಅವರದೋ ಗರ್ಭ ಗುಡಿಯೊಳಗಿನ ದೇವರ ಮೆಲೇರಿದ ಪುಷ್ಪದಂತಹುದು. ನನ್ನದೋ, ಅದರಿಂದ ಬಿಸುಟ, ತೊಗಟೆಯಂತಹುದು. ಆದರೂ, ನನ್ನದೊಂದು ಸಣ್ಣ ಪ್ರಯತ್ನ.

                   ವೀರಕವಿ...............

Thursday 9 June 2011

ಭ್ರಷ್ಟಾಚಾರ.........

          ಭ್ರಷ್ಟತೆಯೇ ಆಚಾರ
            ಭ್ರಷ್ಟತೆಯೇ ವಿಚಾರ
            ಭ್ರಷ್ಟತೆಯೇ ನಮ್ಮ ಆಹಾರ;

            ಭ್ರಷ್ಟತೆಗೇ ಸಹಕಾರ
            ಭ್ರಷ್ಟರಿಗೇ ಪುರಸ್ಕಾರ
            ಭ್ರಷ್ಟಾಚಾರವೇ ನಮಗೆ ಮೂಲಾಧಾರ;

            ಸಂಬಂಧಕೂ ಬೇಕು
            ಸಂಸಾರದಲೂ ಹಾಸು ಹೊಕ್ಕು
            ಸಜ್ಜನರಿಗೀಕಾಲದಲಿ ಎಲ್ಲಿ ದಿಕ್ಕು;

            ಜನಿಸುತಲೇ ಕೊಡಬೇಕು
            ಮರಣಿಸದಲೂ ಇಡಬೇಕು
            ಜನನ ಮರಣಗಳೊಳಗಿಳಿದು ಹುಟ್ಟಿಸುತಿದೆ ಚಳುಕು;

            ನಿನ್ನೆಯವರಿಗಿತ್ತು ಆಸೆ
            ಇಂದಿನವರದೋ ದುರಾಸೆ
            ಇಂದು ಮುಂದಿನವರಿಗೆಲ್ಲಿ ಬಾಳಲಿ ಭರವಸೆ;

            ನಿಗ್ರಹಿಸದಿದ್ದರೇ ಭ್ರಷ್ಟಾಚಾರ
            ಮುಂದಿದೆ ಹಾಹಾಕಾರ;
            ನಿಮ್ಮ ನಮ್ಮೊಳಗಿದೆ ಇದಕೆ ಪರಿಹಾರ;

                        ವೀರಕವಿ............

Wednesday 8 June 2011

ನೆನಪುಗಳು.......


            ನೆನಪುಗಳ ಸಂತೆ
            ಸಿಹಿ ಕಹಿಗಳ ಕಂತೆ;

            ಸಾವಂತ ರೋಗವ
            ಗೆದ್ದಂತಾ ನೆನಪು;

            ಆಪ್ತರೊಂದಿಗೆ ಸೇರಲಾಗದೇ
            ಅತ್ತಂತಾ ನೆನಪು;

            ಸುಳ್ಳಂದು ತಿಂದ
            ಹಣ್ಣಿನಾ ನೆನಪು;

            ಕಿರಿಯವನೆಂಬ ಕಾರಣಕೆ
            ಮೆರೆದಂತಾ ನೆನಪು;

            ಬಡತನದಿ ಬೆಳೆದರೂ         
            ಸಂತಸದಿಂದಿದ್ದ ನೆನಪು;

            ನಾಳೆಗಳ ಚಿಂತಿಸಿ
            ಬಿಕ್ಕಳಿಸಿದಾ ನೆನಪು;

            ಅಜ್ಜಿಯಾ ಮನೆಯಲ್ಲಿ
            ಗೋಳಾಡಿಸಿಕೊಂಡಾ ನೆನಪು;

            ಬೆರಗಿನಲಿ ಬೆಳೆಯುವಾಗಲೇ
            ಅಗಲಿದಪ್ಪನ ನೆನಪು;

            ತಾಯಂತಿದ್ದ ಅಕ್ಕ
            ಬಿಟ್ಟೋದ ನೆನಪು;

            ತುಂಬಿದ್ದ ಮನೆ
            ಬರಿದಾದ ನೆನಪು

            ಹಳೆಯದೆಲ್ಲಾ ನೆನೆದು
            ಬದುಕುತ್ತಿರುವ ನೆನಪು;


                        ವೀರಕವಿ.........